ಕೃಷ್ಣರಾಜಸಾಗರ

ಕರ್ನಾಟಕ ರಾಜ್ಯದ ಅಗಾಧವಾದ ಶಿಲ್ಪ ಕೃತಿಗಳಲ್ಲೊಂದು.  ಇದು ಮೈಸೂರು ನಗರಕ್ಕೆ ನೈರುತ್ಯದಲ್ಲಿ 10 ಮೈಲಿ ದೂರದಲ್ಲಿದೆ.  ಈ ಕಟ್ಟೆಯನ್ನು ಹೇಮಾವತಿ ಮತ್ತು ಲಕ್ಷ್ಮಣತೀರ್ಥ ನದಿಗಳು ಸಂಗಮಬಿಂದುವಿನಿಂದ ಕೆಳಗೆ ಕಾವೇರಿಗೆ ಅಡ್ಡಲಾಗಿ ಇತಿಹಾಸ ಪ್ರಸಿದ್ಧವಾದ ಶ್ರೀರಂಗಪಟ್ಟಣಕ್ಕೆ 9 ಮೈಲಿ ಮೇಲುಗಡೆ ಕಟ್ಟಿದ್ದಾರೆ.  ಇಲ್ಲಿ ಜಲಾಶಯವನ್ನು ಕಟ್ಟುವ ಯೋಚನೆ 1,870ರಿಂದಲೂ ಇತ್ತು.  1900ರಲ್ಲಿ ಮೈಸೂರು ಸರ್ಕಾರ ಕೆ. ಶೇಷಾದ್ರಿ ಅಯ್ಯರ್‍ರವರ ದಿವಾನಗಿರಿಯಲ್ಲಿ ಕೋಲಾರದ ಚಿನ್ನದ ಗಣಿಗಳಿಗೆ ವಿದ್ಯುತ್‍ನ್ನು ಒದಗಿಸಲು ಶಿವಸಮದ್ರದ ವಿದ್ಯುತ್ಕೇಂದ್ರದ ಯೋಜನೆಯನ್ನು ಕೈಗೊಂಡಿತು.  ವಿದ್ಯುತ್ತಿಗೆ ಗಿರಾಕಿ ಹೆಚ್ಚುತ್ತಿರುವಾಗ ಬೇಸಿಗೆಯಲ್ಲಿ ಹೊಳೆಯ ಪ್ರವಾಹ 50 ಕ್ಯೂಸೆಕ್ಸ್‍ಗಳಿಗೆ ಇಳಿಯುತ್ತಿದ್ದುದರಿಂದ ಶಿವಸಮುದ್ರದ ಮೇಲಿನ ಆಣೆಕಟ್ಟುಗಳಲ್ಲಿ ತಾತ್ಕಾಲಿಕವಾಗಿ ನೀರನ್ನು ಕೂಡಿಡಲು ವರ್ಷಕ್ಕೆ ಅರ್ಧಲಕ್ಷ ರೂಪಾಯಿ ಖರ್ಚಾಗುತ್ತಿತ್ತು.  ಅದಕ್ಕಾಗಿ ಎಂ. ವಿಶ್ವೇಶ್ವರಯ್ಯನವರು ಮೈಸೂರಿನ ಪ್ರಧಾನ ಇಂಜಿನಿಯರ್ ಆಗಿ ಬಂದಾಗ ಕಾವೇರಿ ನದಿಗೆ ಅಡ್ಡವಾಗಿ ಕನ್ನಂಬಾಡಿಯಲ್ಲಿ ಒಂದು ಕಲ್ಲುಗಾರೆಯ ಕಟ್ಟೆ ಕಟ್ಟಿ ಜಲಾಶಯವನ್ನು ನಿರ್ಮಿಸಿ ಚಿನ್ನದ ಗಣಿಗಳಿಗೆ ವಿದ್ಯುತ್ತನ್ನು ಮತ್ತು ಮಂಡ್ಯ ಹಾಗೂ ಮಳವಳ್ಳಿಯ ಬೆಂಗಾಡಿನಂಥ ಭೂಮಿಗೆ ನೀರಾವರಿಯನ್ನು ಒದಗಿಸುವುದಕ್ಕೂ ಕೈಗಾರಿಕೆಗಳನ್ನು ಅಭಿವೃದ್ಧಿ ಮಾಡುವುದಕ್ಕೂ 1911ರ ನವೆಂಬರ್ ನಲ್ಲಿ ಒಂದು ಯೋಜನೆಯನ್ನು ತಯಾರಿಸಿದರು.  ಕೂಡಲೇ ಕೆಲಸ ಪ್ರಾರಂಭವಾಯಿತು.  ಅಂದಾಜು ಖರ್ಚು 89,00,000 ರೂಪಾಯಿಗಳು.  ಜಲಾಶಯದಲ್ಲಿ 80 ಅಡಿ ಆಳವಾಗಿ ನೀರನ್ನು ಶೇಖರಿಸುವ ಹಾಗೆ ಕೆಲಸ ಮುಂದುವರಿಯಿತು.  ಚಿನ್ನದ ಗಣಿಗಳೊಂದಿಗೆ ಮಾಡಿಕೊಂಡ ಒಪ್ಪಂದದಂತೆ 1915ರ ಜೂನಿನಲ್ಲಿ ಎಂ. ವಿಶ್ವೇಶ್ವರಯ್ಯನವರ ದಿವಾನ ಗಿರಿಯಲ್ಲಿ 50' ಅಡಿ ಆಳದ ನೀರನ್ನು ಜಲಾಶಯದಲ್ಲಿ ಶೇಖರಿಸಿದರು.  

ಏತನ್ಮಧ್ಯೆ ಈ ಯೋಜನೆಯಿಂದ ತಂಜಾವೂರಿನ ಕುದುರಿನ ಭೂಮಿಗೆ ನೀರು ಸಾಲದೆ ಹೋಗಬಹುದೆಂದು ಮದ್ರಾಸ್ ಸರ್ಕಾರ ಅಡ್ಡಿ ಮಾಡಿತು.  ಈ ವಿಚಾರದಲ್ಲಿ ದೀರ್ಘ ಚರ್ಚೆಯಾಗಿ 1924ರಲ್ಲಿ ಮೈಸೂರು-ಮದರಾಸ್ ಸರ್ಕಾರಗಳಿಗೆ ಕೆಳಗೆ ಕಂಡಂತೆ ಒಡಂಬಡಿಕೆಯಾಯಿತು.

1 ಕೃಷ್ಣರಾಜಸಾಗರದ ಕಟ್ಟೆಯನ್ನು 130' ಎತ್ತರಕ್ಕೆ ಎತ್ತಿ ಜಲಾಶಯದಲ್ಲಿ 124' ಎತ್ತರದ ನೀರನ್ನು ಶೇಖರಿಸಿ 49,229 ಮಿಲಿಯನ್ ಸಲೆ ಅಡಿ ನೀರನ್ನು ಕೂಡಿಟ್ಟು 1,25,000 ಎಕರೆಗಳಿಗೆ ನೀರನ್ನು ಮೈಸೂರು ಸರ್ಕಾರ ಒದಗಿಸಬಹುದು.  2 ಇದಲ್ಲದೆ ಕಾವೇರಿ ಮತ್ತು ಅದರ ಉಪನದಿಗಳಿಗೆ ಅಡ್ಡವಾಗಿ ಒಟ್ಟು 45,000 ಮಿಲಿಯನ್ ಸಲೆ ಅಡಿ ನೀರನ್ನು ಕೂಡಿಟ್ಟು ಇನ್ನೂ 1,10,000 ಎಕರೆಗಳಿಗೆ ನೀರಾವರಿಯನ್ನು ಒದಗಿಸಬಹುದು.  3 ಕಾವೇರಿ ಮತ್ತು ಉಪನದಿಗಳಿಂದ ಈಗ ಇರುವ ನಾಲೆಗಳ ಕೆಳಗೆ ನೀರಿನ ತೆರಿಗೆಯನ್ನು ಹೆಚ್ಚಿಸಿ ಆಗ ಇದ್ದ ನೀರಾವರಿಯನ್ನು 33.33%ರಷ್ಟು ಹೆಚ್ಚಿಸಬಹುದು.
1924ರಲ್ಲಿ ಕಾವೇರಿ ಮತ್ತು ಉಪನದಿಗಳಲ್ಲಿ ಅಭೂತಪೂರ್ವವಾದ ಪ್ರವಾಹ ಬಂದಿತು.  ಅಂದಾಜು ಮಾಡಿದ್ದ 2.5 ಲಕ್ಷ ಕ್ಯೂಸೆಕ್ಸಿಗೆ ಬದಲಾಗಿ 2.9 ಲಕ್ಷ ಕ್ಯೂಸೆಕ್ಸಿನಷ್ಟು ನೀರು ಬಂದದ್ದರಿಂದ ಜಲಾಶಯದ ಕೋಡಿಯನ್ನು 3.5 ಲಕ್ಷ ಕ್ಯೂಸೆಕ್ಸ್ ನೀರನ್ನು ಸುರಕ್ಷಿತವಾಗಿ ಕಟ್ಟೆಯಿಂದ ಬಿಡುವ ಹಾಗೆ ಕಟ್ಟಬೇಕಾಯಿತು.

ಜಲಾಶಯದ ಒಟ್ಟು ಜಲಾನಯನ ಭೂಮಿ 4,100 ಚದರ ಮೈಲಿ.  ಇದರಿಂದ ಈ ಜಾಗದಲ್ಲಿ ವರ್ಷಕ್ಕೆ ಸರಾಸರಿ 55 ಲಕ್ಷ ಎಕರೆ-ಅಡಿ ನೀರು ಬರುತ್ತದೆ.  1924ರಲ್ಲಿ ಇಲ್ಲಿ 2.8 ಲಕ್ಷ ಸೆಲೆ ಅಡಿ ನೀರು ಒಂದು ಸೆಕೆಂಡಿನಲ್ಲಿ ಹರಿಯಿತು.  ಇಲ್ಲಿ ನದಿಯ ತಳ ಸಮುದ್ರಮಟ್ಟದ ಮೇಲೆ 2,344' ಎತ್ತರದಲ್ಲಿದೆ.  ಕಟ್ಟೆಯನ್ನು ಗ್ರಾನೈಟ್ ನೈಸ್ ಬಂಡೆಯ ತಳಪಾಯದ ಮೇಲೆ ಕಟ್ಟಿದ್ದಾರೆ.  ತಳಪಾಯದ ಸರಾಸರಿ ಆಳ 16'.  ಕಟ್ಟೆಯ ಅಗಲ ತಳಪಾಯದಲ್ಲಿ 111'.  ನದಿಯ ತಳದ ಮೇಲೆ ಕಟ್ಟೆಯ ಗರಿಷ್ಠ ಎತ್ತರ 134'.  ಕಟ್ಟೆಯ ಮೇಲುಗಡೆ ರಸ್ತೆಯ ಅಗಲ 14.25'.  ಕಟ್ಟೆಯ ಉದ್ದ 8,600'.
ಕಟ್ಟೆಯಲ್ಲಿ ಒಟ್ಟು 48,330 ಮಿಲಿಯನ್ ಸಲೆ ಅಡಿ ನೀರು ಹಿಡಿಯುತ್ತದೆ.  ಜಲಾಶಯದ ನೀರು ಮೇಲುಗಡೆ 50 ಚದರ ಮೈಲಿಯಷ್ಟು ಹರಡಿರುತ್ತದೆ.  ಸರೋವರದ ಸರಾಸರಿ ಉದ್ದ 25 ಮೈಲಿ, ಅಗಲ 5 ಮೈಲಿ.  ಕಟ್ಟೆಯ ನೀರಿನಲ್ಲಿ ಒಟ್ಟು 31,943 ಎಕರೆ ಭೂಮಿ ಮುಳುಗಡೆಯಾಗಿದೆ.  ಈ ಪೈಕಿ 9,520 ಎಕರೆ ತರಿ, 13,923 ಎಕರೆ ಹಿಡುವಳಿಯಲ್ಲಿರುವ ಖುಷ್ಕಿ.  8,500 ಎಕರೆ ಸರ್ಕಾರದ ವಶದಲ್ಲಿದ್ದ ಪಾಳು ಭೂಮಿ.  ಜಮೀನನ್ನು ಕಳೆದುಕೊಂಡ ರೈತರುಗಳಿಗೆಲ್ಲ ಹತ್ತಿರದಲ್ಲಿಯೇ ಹೊಸ ಊರುಗಳನ್ನು ಕಟ್ಟಿ ಭೂಮಿಯನ್ನು ಕೊಟ್ಟು ಅಲ್ಲಿಗೆ ಹೊಸ ನಾಲೆಗಳನ್ನು ತೆಗೆದು ನೀರಾವರಿಯನ್ನು ಒದಗಿಸಿದೆ.  ಈ ಊರುಗಳಲ್ಲಿ ಆಸ್ಪತ್ರೆ, ಪಾಠಶಾಲೆ-ಮೊದಲಾದ ಎಲ್ಲ ಅನುಕೂಲತೆಗಳನ್ನೂ ಏರ್ಪಡಿಸಿದೆ.
ಕಟ್ಟೆಯನ್ನು ಮಾರಿಕಣಿವೆಯ ಕಟ್ಟೆಯಂತೆಯೇ ಗ್ರಾನೈಟ್ ಕಲ್ಲು ಮತ್ತು ಸುರ್ಕಿ ಗಾರೆಯಿಂದ ಕಟ್ಟಿದ್ದಾರೆ.  ಮಾರಿಕಣಿವೆಯಲ್ಲಿ ಕಲ್ಲುಗಾರೆಯ ಕೆಲಸದವರೂ ಕಲ್ಲನ್ನು ಹೊರುವ ನವಗಾಣಿಗಳೂ ಹೊರಗಡೆಯಿಂದ ಬಂದಿದ್ದರು.  ಆದರೆ ಇಲ್ಲಿ ಮಾರಿಕಣಿವೆಯಲ್ಲಿ ಕೆಲಸವನ್ನು ಕಲಿತ ತಲಕಾಡಿನ ಗೌಂಡಿಗಳೂ ನವಗಾಣಿಗಳೂ ಸ್ಥಳದಲ್ಲಿಯೇ ದೊರೆಯುವ ಸಾಮಗ್ರಿಗಳಿಂದ ಭದ್ರವಾಗಿಯೂ ಅಗ್ಗವಾಗಿಯೂ ಕಟ್ಟಿದ್ದಾರೆ.  ದೊಡ್ಡ ಯಂತ್ರಗಳನ್ನು ಬಳಸಿಲ್ಲ.  ಕಲ್ಲನ್ನು ಬೆಟ್ಟಗಳಿಂದ ಸಾಗಿಸಲು ಟ್ರಾಲಿಗಳನ್ನು ಕಂಬಿಗಳ ಮೇಲೆ ಮೊದಲು ಎಂಜಿನ್ನುಗಳಿಂದ ಎಳೆಸುತ್ತಿದ್ದರು.  ಆಮೇಲೆ ಆಳುಗಳೇ ಟ್ರಾಲಿಗಳನ್ನು ಕಂಬಿಗಳ ಮೇಲೆ ಓಡಿಸುತ್ತಿದ್ದರು.
ಕಟ್ಟೆಯ ತಳಪಾಯದಲ್ಲಿ 90 ಲಕ್ಷ ಸಲೆ ಅಡಿ ಕಲ್ಲು ಮತ್ತು ಮಣ್ಣನ್ನು 1,000 ಸಲೆ ಅಡಿಗೆ 55 ರೂಪಾಯಿಗಳ ಸರಾಸರಿ ದರದಲ್ಲಿ ತೆಗೆದಿದ್ದಾರೆ.  ಇದರ ತಳಪಾಯದ ಕಲ್ಲಿನ ಮೇಲೆ ಚದರ ಅಡಿಗೆ 9 ಟನ್ನಿನ ಗರಿಷ್ಠ ಒತ್ತಡದ ತ್ರಾಸ ಬೀಳುತ್ತದೆ.  ಕಲ್ಲುಗಾರೆಯ ತೂಕ ಸಲೆ ಅಡಿಗೆ 146 ಪೌಂಡ್.  ಕಲ್ಲುಗಾರೆಯ ಕಟ್ಟೆಯ ತೂಕ ಮತ್ತು ಕೂಡಿಟ್ಟ ನೀರಿನ ಒತ್ತಡ ಇವನ್ನೆಲ್ಲ ಗಣನೆಗೆ ತೆಗೆದುಕೊಂಡಾಗ ತಳಪಾಯದ ಮೇಲೆ 8.9 ಟನ್ನಿನ ಗರಿಷ್ಠ ಒತ್ತಡದ ತ್ರಾಸ ಬೀಳುತ್ತದೆ.  ಇದಕ್ಕೆ ಪ್ರತಿಯಾಗಿ ಪೆರಿಯಾರ್ ನದಿಗೆ ಅಡ್ಡಲಾಗಿ 170' ಎತ್ತರವಾದ ಕಾಂಕ್ರೀಟಿನ ಕಟ್ಟೆಯ ತಳದ ಮೇಲೆ ಚದರ ಅಡಿಗೆ 9 ಟನ್ ತ್ರಾಸ ಬೀಳುತ್ತದೆ.

	ಕಟ್ಟೆಯಲ್ಲಿರುವ 30 ಮಿಲಿಯನ್ ಸಲೆ ಅಡಿ ಕಲ್ಲುಗಾರೆಗೆ ಸರಾಸರಿಯಾಗಿ 100 ಸಲೆ ಅಡಿಗೆ 31 ರೂಪಾಯಿ ದರ ಬಿದ್ದಿದೆ.  ಆಗ್ಗೆ ಇದು ಭಾರತದಲ್ಲಿಯೇ ಅತ್ಯಂತ ದೊಡ್ಡ ಕಲ್ಲುಗಾರೆಯ ಕಟ್ಟೆಯಾಗಿತ್ತು ಎಂಬುದು ಗಮನೀಯವಾದ ವಿಚಾರ.

	ಕಟ್ಟೆಯಲ್ಲಿ ಮೂರು ಉದ್ದೇಶಗಳಿಗಾಗಿ ತೂಬುಗಳನ್ನು ಇಟ್ಟಿದ್ದಾರೆ; 1 ಪ್ರವಾಹ ನಿಯಂತ್ರಣ, 2 ನೀರಾವರಿ, 3 ವಿದ್ಯುತ್ತಿನ ಉತ್ಪಾದನೆ.  ಅವನ್ನು ಕೆಳಗೆ ಕೊಟ್ಟಿದೆ.

	ಪಟ್ಟಿಯಲ್ಲಿ 7ನೆಯ ನೀರಾವರಿಯ ತೂಬಿನಿಂದ ನೀರು 350' ಉದ್ದವಾದ ಸಣ್ಣ ಸುರಂಗದ ಮೂಲಕ ಹರಿದು 3,500 ಎಕರೆ ಭೂಮಿಗೆ ನೀರಾವರಿಯನ್ನು ಒದಗಿಸುವ ಬಲದಂಡೆಯ ನಾಲೆಗೆ ಹೋಗುತ್ತದೆ.  ಇದು ಮೈಸೂರಿನಲ್ಲಿ ಕೊರೆದ ಮೊಟ್ಟ ಮೊದಲನೆಯ ಸುರಂಗ.  9ನೆಯ ಉತ್ತರ ದಡದ ತೂಬಿನಿಂದ ವಿಶ್ವೇಶ್ವರಯ್ಯ ನಾಲೆಗೆ ನೀರನ್ನು ಬಿಟ್ಟು ಮಂಡ್ಯ ಮತ್ತು ಮಳವಳ್ಳಿ ತಾಲ್ಲೂಕುಗಳಲ್ಲಿ 1,20,000 ಎಕರೆ ಭೂಮಿಗೆ ನೀರಾವರಿಯನ್ನು ಒದಗಿಸಿದ್ದಾರೆ.  ಮಂಡ್ಯ ಜಿಲ್ಲೆಯ ಅಭಿವೃದ್ಧಿಗೆಲ್ಲ ಈ ನಾಲೆಯೇ ಕಾರಣ.  8ನೆಯ ಉತ್ತರ ದಡದ ತಗ್ಗಿನ ಮಟ್ಟದ ತೂಬಿನ ನೀರು ತಗ್ಗಿನ ಮಟ್ಟದ ನಾಲೆಯ ಮೂಲಕ 1,500 ಎಕರೆಗೆ ನೀರನ್ನು ಒದಗಿಸುತ್ತದೆ.  ಈ ನಾಲೆಗೆ ಮೇಲಿನ ಮಟ್ಟದ ವಿಶ್ವೇಶ್ವರಯ್ಯ ನಾಲೆಯ ಕೆಳಗಿನ ಜಮೀನಿನ ಬೀಳು ನೀರು ಬೀಳುತ್ತದೆ.  10ನೆಯ ನದಿಯ ಮಟ್ಟದ ಮೇಲೆ 53' ಎತ್ತರದಲ್ಲಿ 6' ವ್ಯಾಸದ ನಾಲ್ಕು ತಿರುಬಾನಿ ಕೊಳವಿಗಳನ್ನು ಇಟ್ಟಿದೆ.  ನಡುಹೊಳೆಯಲ್ಲಿರುವ 8 ಬಾಗಿಲುಗಳು, 50' ಎತ್ತರದಲ್ಲಿರುವ 3 ಮತ್ತು 80' ಎತ್ತರದಲ್ಲಿರುವ 16 ಬಾಗಿಲುಗಳಿಂದಲೂ ಸರೋವರದ ನೀರು 124' ಮಟ್ಟದಲ್ಲಿದ್ದಾಗ 1.42 ಲಕ್ಷ ಕ್ಯೂಸೆಕ್ಸ್‍ಗಳನ್ನು ಸಾಗಿಸಬಹುದು.	1924ರಲ್ಲಿ ಹೊಳೆಯಲ್ಲಿ ಬಂದಂಥ ಮಹಾಪ್ರವಾಹವನ್ನು ಸಾಗಿಸಲು 3ನೆಯ 103' ಮಟ್ಟದ 48 ಬಾಗಿಲುಗಳ ಮೇಲುಗಡೆ 114' ಮಟ್ಟದಲ್ಲಿ 4ನೆಯ 48 ಬಾಗಿಲುಗಳನ್ನು ಇಟ್ಟಿದೆ.  ಇವುಗಳಲ್ಲಿ ಕೆಳಗಿನ ಬಾಗಿಲುಗಳನ್ನು ಕೈಯಿಂದ ಎತ್ತಬೇಕು. ಮೇಲಿನ ಕಂಡಿಕೆಗಳಿಗೆ ಎಂ. ವಿಶ್ವೇಶ್ವರಯ್ಯನವರಿಂದ ನಿರ್ಮಿತವಾದ ಸ್ವಯಂಚಾಲಿಯಾದ ಬಾಗಿಲುಗಳಿವೆ.  ಈ ಕೋಡಿಯ ಬಾಗಿಲುಗಳೆಲ್ಲದರಿಂದ ಒಟ್ಟು 3.5ಲಕ್ಷ ಕ್ಯೂಸೆಕ್ಸಗಳ ಪ್ರವಾಹವನ್ನು ಸುರಕ್ಷಿತವಾಗಿ ಹೊಳೆಯಲ್ಲಿ ಸಾಗಿಸಬಹುದು.

 ಸಂಖ್ಯೆ  ಉದ್ದೇಶ  ಮಟ್ಟ  ಅಳತೆ  ತೂಬಿನ ಸಂಖ್ಯೆ  ಸ್ಥಳ 1  ಪ್ರವಾಹ ನಿಯಂತ್ರಣ  +12  6'ಅ 12'  8  ನಡುಹೊಳೆ 2  ಗೋಡಿನ ಸಾಗಣೆ  +50  6'ಅ 15'  3  ಉತ್ತರ(ಎಡ)ದಡ 3  ಕೋಡಿಯ ತೂಬು  +103  10'ಅ 8'  48  ದಕ್ಷಿಣ(ಬಲ)ದಡ 4  ,+114,10'ಅ 10',48, 5    +106  8'ಅ 12'  40   6  ,+80,10'ಅ 20',16, 7  ನೀರಾವರಿ  +60  6'ಅ 8'  1   8  ,+40,4'ಅ 8',1,ಉತ್ತರ(ಎಡ)ದಡ 9  ,+60,6'ಅ 12',3, 10  ವಿದ್ಯುತ್ತಿನ ಉತ್ಪಾದನೆ  +63  6' ವ್ಯಾಸ  4  ವಿದ್ಯುದುತ್ಪಾದನೆ

	ಮಳೆಗಾಲದಲ್ಲಿ ತುಂಬಿದ ಸರೋವರದ ಹರಡನ್ನು ನೋಡುವುದೇ ಒಂದು ರೋಮಾಂಚನಕಾರಿಯಾದ ಅನುಭವ.  ಮಿರ್ಜಾ ಇಸ್ಮಾಯಿಲ್ ಅವರ ದಿವಾನಗಿರಿಯಲ್ಲಿ ಕಟ್ಟೆಯ ಹಿಂದುಗಡೆ ಕಾಶ್ಮೀರದ ಪಾಲಿಮಾರ್ ತೋಟವನ್ನು ಹೋಲುವ ಬೃಂದಾವನವನ್ನು ಎರಡು ದಡಗಳಲ್ಲಿಯೂ ನಿರ್ಮಿಸಿದರು.  ಪ್ರೇಕ್ಷಕರ ತಂಡಗಳನ್ನು ಈ ಸರೋವರ ಆಕರ್ಷಿಸುತ್ತದೆ.  ದಕ್ಷಿಣ ದಡದಲ್ಲಿ ಊಟ ಮತ್ತು ತಿಂಡಿಗಾಗಿ ಆಧುನಿಕವಾದ ಉಪಾಹಾರಗೃಹಗಳು ನಿರ್ಮಾಣವಾಗಿವೆ.  ಇಲ್ಲಿ ಆಧುನಿಕವಾದ ಒಂದು ಜಲಭಾರಶಾಸ್ತ್ರದ ಪ್ರಯೋಗಶಾಲೆಯನ್ನು ಕಟ್ಟಿದ್ದಾರೆ.                  						
(ಎಚ್.ಸಿ.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ